June 17, 2026

ಟಾಟಾ ಎಸಿ – ಕಾರು ನಡುವೆ ಭೀಕರ ಡಿಕ್ಕಿ; ಪ್ರಯಾಣಿಕರಿಗೆ ಗಂಭೀರ ಗಾಯ

ಹೊಸಪೇಟೆ: ತಾಲ್ಲೂಕಿನ ಧರ್ಮಸಾಗರ ಗ್ರಾಮದ ಬಳಿ ಟಾಟಾ ಎಸಿ ಗೂಡ್ಸ್ ವಾಹನ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ನಡೆದಿದೆ.

ಘಟನೆಯ ವಿವರ: ಬಳ್ಳಾರಿಯಿಂದ ಹೊಸಪೇಟೆ ಕಡೆಗೆ ತೆರಳುತ್ತಿದ್ದ ಕಾರಿಗೆ, ಎದುರಿನಿಂದ ಬಂದ ಟಾಟಾ ಎಸಿ ಗೂಡ್ಸ್ ವಾಹನವು ಚಾಲಕನ ಅಜಾಗರೂಕತೆಯಿಂದಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದವರಿಗೆ ತೀವ್ರ ರಕ್ತಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೈವೇ ಕಾಮಗಾರಿ ವಿಳಂಬವೇ ಕಾರಣ? ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆಯುತ್ತಿರುವ ಮಂದಗತಿಯ ರಸ್ತೆ ಕಾಮಗಾರಿಯೇ ಈ ಅಪಘಾತಕ್ಕೆ ನೇರ ಕಾರಣ ಎಂದು ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ನಿರ್ಮಾಣ ಮಾಡುತ್ತಿರುವ ಕಂಪನಿಯು ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ಅಥವಾ ‘ಸೈನ್ ಬೋರ್ಡ್’ಗಳನ್ನು ಅಳವಡಿಸದೆ ಇರುವುದು ಇಂತಹ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಪೊಲೀಸ್ ಭೇಟಿ: ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಗಾದಿಗೂನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

error: Content is protected !!